ಆಳ್ವಿಕೆ ಸು. 329-ಸು. 335, ಗುಪ್ತ ಮನೆತನದ ಒಬ್ಬ ದೊರೆ. ಘಟೋತ್ಕಚಗುಪ್ತನ ಮಗ. ತಂದೆಯ ತರುವಾಯ ಸು. 320ರಲ್ಲಿ ಸಿಂಹಾಸನವನ್ನೇರಿದ. ಈ ಮನೆತನದ ಅತ್ಯಂತ ಪ್ರತಾಪಶಾಲಿ ಅರಸನೂ ಗುಪ್ತ ಸಾಮ್ರಾಜ್ಯದ ಸಂಸ್ಥಾಪಕನೂ ಆದ ಸಮುದ್ರಗುಪ್ತ ಸಿಂಹಾಸನವನ್ನೇರಿದ ವರ್ಷದಿಂದ ಆರಂಭವಾಗಿ ಗುಪ್ತರ ಹೆಸರಿನಲ್ಲಿ ಒಂದು ಶಕೆಯನ್ನು ಗಣನೆಗೆ ತರಲಾಯಿತೆಂದು ಆರ್.ಸಿ.ಮಜುಂದಾರ್ ಅಭಿಪ್ರಾಯಪಟ್ಟಿದ್ದಾರಾದರೂ. 320ರ ಫೆಬ್ರವರಿ 26ರಂದು ಆರಂಭಿಸಲಾದ ಗುಪ್ತ ಶಕವನ್ನು 1ನೆಯ ಚಂದ್ರಗುಪ್ತ ತನ್ನ ಸಿಂಹಾಸನಾರೋಹಣದ ಸ್ಮರಣಾರ್ಥವಾಗಿ ಆರಂಭಿಸಿದನೆಂದು ಈಗ ಸಾಮಾನ್ಯವಾಗಿ ಒಪ್ಪಲಾಗಿದೆ. 

ಗುಪ್ತ ವಂಶ ಪ್ರಾಮುಖ್ಯಕ್ಕೆ ಬಂದದ್ದು ಈತನ ಕಾಲದಲ್ಲೇ. ಈತನ ತಂದೆ-ತಾತಂದಿರು ಕೇವಲ ಮಹಾರಾಜ ಎಂಬ ಬಿರುದಿನಿಂದ ಬಂಗಾಳದ ಕೆಲಭಾಗಗಳನ್ನು ಆಳುತ್ತಿದ್ದರು. ಮಹಾರಾಜಾಧಿರಾಜ ಎನಿಸಿಕೊಂಡ ಚಂದ್ರಗುಪ್ತನನ್ನು ಈ ಮನೆತನದ ಮೊದಲ ಸ್ವತಂತ್ರ ಅರಸನೆಂದು ಪರಿಗಣಿಸಬಹುದು. ಬಿಹಾರ ಪ್ರಾಂತ್ಯದ ಉತ್ತರ ಭಾಗದಲ್ಲಿ ವೈಶಾಲಿ ಮತ್ತು ನೇಪಾಳಗಳ ನಡುವಣ ಪ್ರದೇಶ ಪ್ರಾಚೀನ ಭಾರತದ ಸುಪ್ರಸಿದ್ಧ ಲಿಚ್ಛವಿ ಗಣರಾಜ್ಯವಾಗಿತ್ತು. ಗುಪ್ತರು ಆಳುತ್ತಿದ್ದಿರಬಹುದಾದ ಪ್ರದೇಶಕ್ಕೆ ಇದು ಹೊಂದಿದಂತಿತ್ತು. ಆ ಮನೆತನದ ರಾಜಕುಮಾರಿ ಕುಮಾರದೇವಿಯನ್ನು ಚಂದ್ರಗುಪ್ತ ಮದುವೆಯಾದ. ಇದು ಇವನ ಬಾಳಿನಲ್ಲಿ ಮಹತ್ತ್ವದ ಘಟನೆ. ಆ ವಂಶದಲ್ಲೇ ಗಂಡು ಸಂತತಿಯಿಲ್ಲದ್ದರಿಂದ ಲಿಚ್ಛವಿ ರಾಜ್ಯ ಕುಮಾರದೇವಿಯ ಮೂಲಕ ಇವನಿಗೆ ದೊರಕಿತು. ತತ್ಫಲವಾಗಿ ಇವನ ರಾಜ್ಯ ವಿಸ್ತಾರಗೊಂಡಿತು. ಈ ಸಂಬಂಧದ ಮಹತ್ವವನ್ನು ಸೂಚಿಸಲೆಂದೇ ಈತ ಅಚ್ಚು ಹಾಕಿಸಿದ ಸುವರ್ಣ ನಾಣ್ಯಗಳ ಒಂದು ಬದಿಯಲ್ಲಿ ಈತನ ರಾಣಿಯಾದ ಕುಮಾರದೇವಿಯ ಚಿತ್ರವನ್ನೂ ಇನ್ನೊಂದು ಬದಿಯಲ್ಲಿ ಸಿಂಹದ ಮೇಲೆ ಕುಳಿತ ದೇವಿಯ ಚಿತ್ರವನ್ನೂ ‘ಲಿಚ್ಛವಯಃ’ ಎಂಬ ಆಲೇಖವನ್ನೂ ಕೆತ್ತಲಾಗಿದೆ. ಪುರಾಣಗಳಲ್ಲಿಯ ಹೇಳಿಕೆಗಳನ್ನು ಆಧರಿಸಿ, ಈತ ಸಾಕೇತ (ಅವಧಿ), ಪ್ರಯಾಗ ಮತ್ತು ಮಗಧ (ದಕ್ಷಿಣ ಬಿಹಾರ) ರಾಜ್ಯಗಳ ಅಧಿಪತಿಯಾಗಿದ್ದನೆಂದು ಊಹಿಸಬಹುದು. ಇವನ ಇತರ ಸಾಧನೆಗಳ ವಿವರಗಳು ತಿಳಿದಿಲ್ಲ. ತನ್ನ ಮಕ್ಕಳ ಪೈಕಿ ಹೆಚ್ಚು ಶಕ್ತನಾದ ಸಮುದ್ರಗುಪ್ತನನ್ನು ತುಂಬಿದ ಆಸ್ಥಾನದಲ್ಲಿ ಈತ ತನ್ನ ಉತ್ತರಾಧಿಕಾರಿಯಾಗಿ ಆರಿಸಿದನೆಂದು ಸಮುದ್ರಗುಪ್ತನ ಅಲಹಾಬಾದ್ ಶಾಸನದಿಂದ ತಿಳಿಯುತ್ತದೆ. ಇವನಿಗೆ ಕಾಚಗುಪ್ತನೆಂಬ ಹಿರಿಯ ಮಗ ಇದ್ದನೆಂದು ಹೇಳಲಾಗಿದೆ. ಆದರೆ ಈ ವಿಚಾರಗಳು ಇನ್ನೂ ವಿವಾದಸ್ಪದವಾಗಿವೆ. 	(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ